ಬಹಳ ಹಿಂದಿನ ಕಾಲದಿಂದಲೂ ಭಾರತೀಯರಲ್ಲಿ ಬಳಕೆಯಲ್ಲಿರುವ ಎಂಟು ಪದ್ಯಗಳುಳ್ಳ ಶ್ಲೋಕಗುಚ್ಛಗಳು. ಕೆಲವು ವೇಳೆ ಫಲಶ್ರುತಿ ರೂಪವಾದ ಇಲ್ಲವೇ ಕವಿಪರಿಚಯವನ್ನು ಸೂಚಿಸುವ ಒಂದೆರಡು ಶ್ಲೋಕಗಳು ಜೊತೆಗೆ ಸೇರಿರುವುದುಂಟು. ಎಂಟು ಎಂಬ ಸಂಖ್ಯೆಯ ಬಗೆಗೆ ಭಾರತೀಯರಲ್ಲಿ ಒಂದು ಬಗೆಯ ಪವಿತ್ರತಾಭಾವನೆ, ಗೌರವ ಇದೆ. ಆದ್ದರಿಂದಲೇ ನಾಮಜಪ, ಮಂತ್ರಜಪ, ಹೋಮ, ಅರ್ಚನೆ ಮುಂತಾದುವು ಗಳಲ್ಲಿ ಎಂಟರಿಂದ ಕೂಡಿದ ಇಪ್ಪತ್ತೆಂಟು, ನೂರೆಂಟು, ಸಾವಿರದೆಂಟು (ಅಷ್ಟವಿಂಶತಿ, ಅಷ್ಟೋತ್ತರಶತ, ಅಷ್ಟೋತ್ತರ ಸಹಸ್ರ) ಮೊದಲಾದ ಸಂಖ್ಯಾಪರಿಮಿತಿಯ ಬಳಕೆಯಿದೆ. ಹಾಗೆಯೆ ಈ ಎಂಟು ಶ್ಲೋಕಗಳ ಪದಗುಚ್ಛದ ಹಿರಿಮೆ.

ಅಷ್ಟಕಗಳೆಲ್ಲವೂ ಸಾಧಾರಣವಾಗಿ ದೇವತಾಸ್ತುತಿ ರೂಪವಾದುವು. ಅನುಷ್ಟುಭ್ನಿಂದ ಹಿಡಿದು ಎಲ್ಲ ಛಂದಸ್ಸಿನಲ್ಲಿ ಇವು ರಚಿತವಾಗಿವೆ. ಎಲ್ಲ ದೇವತೆಗಳ ವಿಷಯದಲ್ಲೂ ರಚಿತವಾಗಿವೆ. ವಾಲ್ಮೀಕಿಕೃತವೆಂದು ಹೇಳಲಾದ ಗಂಗಾಷ್ಟಕವೂ ಪ್ರಹ್ಲಾದ ಕೃತವೆನಿಸಿದ ಶ್ರೀಹರ್ಯಷ್ಟಕವೂ ಇವುಗಳಲ್ಲಿ ಪ್ರಾಚೀನತಮವಿರಬಹುದು. ಪುಷ್ಕರಾಷ್ಟಕ, ಪ್ರಯಾಗಾಷ್ಟಕ, ಸರಸ್ವತ್ಯಷ್ಟಕ, ಶೀತಲಾಷ್ಟಕ ಮುಂತಾಗಿ ಹಲವು ಅಷ್ಟಕಗಳು ಪುರಾಣಾಂತರ್ಗತಗಳು. ಎಲ್ಲ ಮತಾಚಾರ್ಯರೂ ತಮ್ಮ ತಮ್ಮ ಇಷ್ಟದೇವತೆಗಳನ್ನು ಕುರಿತು ಅಷ್ಟಕಗಳನ್ನು ರಚಿಸಿದ್ದಾರೆ. ಅಚ್ಯುತಾಷ್ಟಕ, ಅನ್ನಪುರ್ಣಾಷ್ಟಕ, ಗುರ್ವಾಷ್ಟಕ, ಜಗನ್ನಾಥಾಷ್ಟಕ ಮೊದಲಾಗಿ 20ಕ್ಕೂ ಮೇಲ್ಪಟ್ಟು ಅಷ್ಟಕಗಳು ಶ್ರೀಶಂಕರಾಚಾರ್ಯರ ಹೆಸರಿನಲ್ಲಿ ಬಳಕೆಯಲ್ಲಿವೆ. ವೇದಾಂತಾಚಾರ್ಯರೆಂದು ಪ್ರಖ್ಯಾತರಾದ ವೆಂಕಟನಾಥರೂ ಕಾಮಾಸಿಕ ನೃಸಿಂಹಾಷ್ಟಕ, ಅಷ್ಟಭುಜಾಷ್ಟಕ, ಸುದರ್ಶನಾಷ್ಟಕಗಳನ್ನು ರಚಿಸಿದ್ದಾರೆ. ಕಾಳಿದಾಸಕೃತವೆಂಬ ಗಂಗಾಷ್ಟಕವೊಂದು ರೂಢಿಯಲ್ಲಿವೆ. ಅಗಸ್ತ್ಯಾಷ್ಟಕ, ತಾರಾಷ್ಟಕ, ಶೀತಲಾಷ್ಟಕ, ನರ್ಮದಾಷ್ಟಕ, ಸೂರ್ಯಾಷ್ಟಕ, ಮಹಾಲಕ್ಷ್ಮ್ಯಷ್ಟಕ, ಸುಬ್ರಹ್ಮಣ್ಯಾಷ್ಟಕ ಮುಂತಾದುವು ದಿಗ್ದರ್ಶಕವಾಗಲು ಸಾಕಾಗುವ ಕೆಲವು ಅಷ್ಟಕಗಳು. ಅಂತೂ ಚಿಕ್ಕವಾಗಿ ಚೊಕ್ಕವಾಗಿ ವಿಶಾಲವಾದ ಭಾವಗಳನ್ನು ಸಂಗ್ರಹವಾಗಿ ನಿರೂಪಿಸಿ ನೆನಪಿನಲ್ಲಿಡಲು ಅನುಕೂಲಿಸುವಂತೆ ರಚಿತವಾದ ಅಷ್ಟಕಗಳು ಜನತೆಯ ಆದರಕ್ಕೆ ಪಾತ್ರವಾಗಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ